ಪಾಂಡವ ನ್ಯೂಸ್, ರಾಣೇಬೆನ್ನೂರು: ನಗರದ ಹೃದಯ ಭಾಗದಲ್ಲಿರುವ ಬಸ್ಟ್ಯಾಂಡ್ (22ನೇ ವಾರ್ಡ) ಹತ್ತಿರದ ಹೆಸರಾಂತ ಹೋಟೆಲ್ ಎನ್ನಲಾಗುತ್ತಿರುವ ‘ಅಕ್ಷಯ ಬೇಕರಿ & ಸ್ವೀಟ್ಸ್, ಅಕ್ಷಯ್ ಹೋಟೆಲ್‍ನಲ್ಲಿ ನಿಷೇಧಿತ ಪ್ಲಾಸ್ಟಿಕ್‍ನ್ನು ಬಳಸುವುದಲ್ಲದೆ, ಅಡುಗೆ ಕೋಣೆ ಮಾತ್ರ ಕೆಂಗೇರಿ ಮೋರಿಯಂತಾಗಿದ್ದನ್ನು ಗಮನಿಸಿದ ಸಾರ್ವಜನಿಕರು, ನಗರಸಭೆ ಪೌರಾಯುಕ್ತ ಫಕ್ಕೀರಪ್ಪ ಇಂಗಳಗಿಯವರಿಗೆ ದೂರು ನೀಡಿ ಗ್ರಾಹಕರ ಆರೋಗ್ಯದ ಬಗ್ಗೆ ಕಾಳಜಿ ಮೆರೆದಿದ್ದಾರೆ. ಕೂಡಲೇ ಕಾರ್ಯ ಪ್ರವೃತ್ತರಾದ ಪೌರಾಯುಕ್ತ ಇಂಗಳಗಿಯವರು ಶುಕ್ರವಾರ ಸ್ಥಳಕ್ಕೆ ದಾಳಿ ನಡೆಸಿ ವ್ಯಾಪಾರವನ್ನು ತಾತ್ಕಾಲಿಕವಾಗಿ ರದ್ಧತಿ ಮಾಡಿ ಆದೇಶ ಹೊರಡಿಸಿದ್ದಾರೆ.
ಈ ‘ಅಕ್ಷಯ್ ಹೋಟೆಲ್ ಮತ್ತು ಬೇಕರಿ’ಯು ವೆಂಕಟೇಶ್ ಪವಾರ ಎಂಬುವರ ಮಾಲೀಕತ್ವದಲ್ಲಿದೆ. ಪೌರಾಯುಕ್ತರು ಇಲ್ಲಿ ದಾಳಿ ನಡೆಸಿದಾಗ ಹತ್ತು ಹಲವು ಅಶುಚಿತ್ವತೆ ಕಂಡು ಬಂದಿವೆ. ಅವುಗಳೆಂದರೆ, ನಗರಸಭೆಯಿಂದ ಉದ್ದಿಮೆ ಪರವಾನಿಗೆ ನವೀಕರಿಸದೆ ಇರುವುದು. ಆಹಾರ ಪದಾರ್ಥಗಳನ್ನು ಪಾರ್ಸಲ್ ಕೊಡುವಾಗ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡಿರುವುದು. ಬೇಕರಿ ಸಿಬ್ಬಂದಿಗಳು ತಲೆಗೆ ಎಫ್ರಾನ್ ಧರಿಸದೆ, ಕೈಗಳಿಗೆ ಗ್ಲೌಸ್‍ಗಳನ್ನು ಹಾಕಿಕೊಳ್ಳದೆ ಹಾಗೆಯೇ ಆಹಾರ ತಯಾರಿಕೆ ಮಾಡುವುದು ಮತ್ತು ವಿತರಣೆ ಮಾಡುವುದು ಕಂಡು ಬಂದಿದೆ. ಬೇಕರಿಯಲ್ಲಿ ಮತ್ತು ಹೋಟೆಲ್‍ನಲ್ಲಿ ಯಾವುದೇ ಸ್ವಚ್ಚತೆ ಕಾಪಾಡದೆ ಇರುವುದು. ಬೇಕರಿಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದ ನೀರನ್ನು ನೇರವಾಗಿ ಭಂಗಿ ರಸ್ತೆಗೆ ಬಿಟ್ಟು ಅಶುಚಿತ್ವದ ವಾತಾವರಣವನ್ನು ನಿರ್ಮಾಣ ಮಾಡಿ ಸಾರ್ವಜನಿಕ ಆರೋಗ್ಯಕ್ಕೆ ಮತ್ತು ನಗರದ ಸೌಂದರ್ಯಕ್ಕೆ ಧಕ್ಕಯುಂಟು ಮಾಡಿದ್ದು ಕಂಡು ಬಂದಿರುತ್ತದೆ.
ಈ ಎಲ್ಲ ಅವಾಂತರಗಳನ್ನು ಗಮನಿಸಿದ ಪೌರಾಯುಕ್ತ ಫಕ್ಕೀರಪ್ಪ ಇಂಗಳಗಿಯವರು, ಕಾರಣಾಂತರಗಳಿಂದ ಈ ಆದೇಶ ತಲುಪಿದ ತಕ್ಷಣದಿಂದಲೇ ಉದ್ದಿಮೆಯನ್ನು ತಾತ್ಕಾಲಿಕವಾಗಿ ಮುಂದಿನ ಆದೇಶದವರೆಗೆ ಬಂದ್ ಮಾಡತಕ್ಕದ್ದು. ಒಂದು ವೇಳೆ ಉಲ್ಲಂಘಿಸಿದಲ್ಲಿ ತ್ಯಾಜ್ಯ ನಿರ್ವಹಣೆ ನಿಯಮಗಳು-2016 ಮತ್ತು ಕರ್ನಾಟಕ ಪೌರಸಭೆ ಅಧಿನಿಯಮಗಳನ್ವಯ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಹಾಗೂ ಉದ್ದಿಮೆ ಪರವಾನಿಗೆಯನ್ನು ಶಾಸ್ವತವಾಗಿ ರದ್ದು ಮಾಡಿ, ಉದ್ದಿಮೆಯನ್ನು ಬಂದ್ ಮಾಡಲಿಕ್ಕೆ ಕ್ರಮ ವಹಿಸಲಾಗುವುದು ಎಂದು ಆದೇಶ ಹೊರಡಿಸಿದ್ದಾರೆ.
ಅಕ್ಷಯ್ ಹೋಟೆಲ್ ಮೇಲೆ ದಾಳಿ ಮಾಡಿದ ನಗರಸಭೆ ಪೌರಾಯುಕ್ತ
On: March 21, 2025 1:53 PM
--Ad--


