ರಾಣೇಬೆನ್ನೂರು 13: ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ತನ್ನದೇ ಆದ ಇತಿಹಾಸವಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಅಡಿ ನಮ್ಮ ಹಿರಿಯರು ಹಾಕಿಕೊಟ್ಟ ಸವಿನೆನಪಿಗಾಗಿ ಇಂತಹ ಕಾರ್ಯಕ್ರಮ ನಡೆಯುತ್ತಿರುವುದು ಸಂತೋಷ ತಂದಿದೆ ಎಂದು ಕಾಕಿ ಜನಸೇವಾ ಸಂಸ್ಥೆಯ ಅಧ್ಯಕ್ಷರಾದ ಶ್ರೀನಿವಾಸ ಕಾಕಿ ಹೇಳಿದರು. ಮಂಗಳವಾರ ಇಲ್ಲಿನ ಗೌರಿಶಂಕರ ನಗರದ ಕಾಕಿ ಕುಟುಂಬದವರ ಸಿದ್ಧಿವಿನಾಯಕ, ಆಂಜನೇಯ ಮತ್ತು ನವಗ್ರಹ ದೇವಸ್ಥಾನಗಳ ಆವರಣದಲ್ಲಿ ಹಾವೇರಿ ಜಿಲ್ಲಾ ಹಾಗೂ ರಾಣೇಬೆನ್ನೂರು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಏರ್ಪಡಿಸಲಾಗಿದ್ದ ದಿ|| ದೊಡ್ಡನಾಗಪ್ಪ ತಿರುಕಪ್ಪ ಕಾಕಿ ಸ್ಮಾರಕ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಒಟ್ಟೊಟ್ಟಿಗೆ ಜನಸೇವಾ ಸಂಸ್ಥೆಯ ವತಿಯಿಂದ ನಮ್ಮ ತಂದೆ ದಿ|| ದೊಡ್ಡನಾಗಪ್ಪ ತಿರುಕಪ್ಪ ಕಾಕಿ ಮತ್ತು ಚಿಕ್ಕಪ್ಪ ದಿ|| ಸಣ್ಣನಾಗಪ್ಪ ತಿರುಪ್ಪ ಕಾಕಿ ಅವರ ಸ್ಮರಣೆಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ ಭಾರಿ ಸವಾಲ್ ಭಜನಾ ಕಾರ್ಯಕ್ರಮ ಸಹ ನಡೆಯುತ್ತಿರುವುದು ನಮ್ಮ ಕುಟುಂಬದವರಿಗೆ ತುಂಬಾ ಸಂತೋಷ ತಂದಿದೆ ಎಂದರು.
ದಿ|| ದೊಡ್ಡನಾಗಪ್ಪ ತಿರುಕಪ್ಪ ಕಾಕಿ ಅವರ ಹೆಸರಿನಲ್ಲಿ ನಡೆದ ದತ್ತಿ ಕಾರ್ಯಕ್ರಮದ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷರಾದ ವೆಂಕಟೇಶ ಈಡಿಗರ ಅವರು ಜನರ ಮನೋಭಾವದ ಪದಗಳೇ ಜನಪದ ಸಂಸ್ಕೃತಿಯ ಮೂಲ ಸೆಲೆ. ಜನರ ಪದ ಅಂದರೆ ನೆಲಮೂಲ. ಸಂಸ್ಕೃತಿಯ ಜೀವನ ಕ್ರಮದ ದೈನಂದಿನ ವೈವಿಧ್ಯಮಯ ಚಟುವಟಿಕೆಗಳನ್ನು ಬಾಯಿಂದ ಬಾಯಿಗೆ ಹರಿದು ಬರುವ ಮೌಖಿಕ ಸಾಹಿತ್ಯವಾಗಿದೆ. ಅನಕ್ಷರಸ್ತ ಬದುಕಿನ ಅಂದಿನ ಆಚಾರ ವಿಚಾರ ರೂಢಿ ಸಂಪ್ರದಾಯಗಳು ಇಂದಿನ ಜನಪದವಾದರೆ, ಇಂದಿನ ನಡೆಭಾಷೆ, ನೆಲ ಜನವನ್ನೊಳಗಂಡ ಸಂಸ್ಕೃತಿಯು ಮುಂದಿನ ಪೀಳಿಗೆಗೆ ಜನಪದವಾಗಿ ಪರಿಣಮಿಸುತ್ತದೆ. ಮತ್ತು ಅದು ಆಯಾ ಕಾಲಕ್ಕೆ ತಕ್ಕಂತೆ ಬದಲಾವಣೆಗೊಂಡರೂ ಜನಪದದ ಮೂಲ ಲಕ್ಷಣವನ್ನು ಉಳಿಸಿಕೊಂಡು ಜನಾಕರ್ಷಣೆಗೆ ಕಾರಣವಾಗುತ್ತದೆ. ಜನಜೀವನದ ಎಲ್ಲಾ ಚಟುವಟಿಕೆಗಳು, ಕತೆ, ಕವನ, ನಾಟಕ, ನೃತ್ಯ ಹಾಗೂ ಸಂಗೀತದ ರೂಪದಲ್ಲಿ ಅಭಿವ್ಯಕ್ತಿಗೊಂಡು ಜನಪದದ ಗತ ಕಾಲವನ್ನು ನೆನಪಿಸಿ ಗತಿಬಿಂಬವಾಗಿ ಮುಂದೆ ಸಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರಸಭೆಯ ಸದಸ್ಯರಾದ ಪುಟ್ಟಪ್ಪ ಮಾರಿಯಮ್ಮನವರ ವಹಿಸಿದ್ದರು. ವೇದಿಕೆಯಲ್ಲಿ ದತ್ತಿ ದಾನಿಗಳಾದ ಹನುಮಂತಪ್ಪ ಕಾಕಿ, ಸಣ್ಣಹನುಮಂತಪ್ಟ ಕಾಕಿ, ರೂಪಾ ಕಾಕಿ, ವಿಜಯಲಕ್ಷ್ಮಿ ಕಾಕಿ, ಗಂಗಮ್ಮ ಕಾಕಿ, ಜೆಸಿ. ವೆಂಕಟೇಶ ಕಾಕಿ ಹಾಗೂ ಕಾಕಿ ಕುಟುಂಬದವರು ಮತ್ತು ಜನಪದ ಕಲಾವಿದರಾದ ಡಾ. ಕೆ ಸಿ ನಾಗರಾಜ್ಜಿ, ಸ್ವಾಭಿಮಾನಿ ಕರವೇ ರಾಜ್ಯಾಧ್ಯಕ್ಷರಾದ ನಿತ್ಯಾನಂದ ಕುಂದಾಪುರ, ಜೆಸಿ. ಪ್ರಭುಲಿಂಗಪ್ಪ ಹಲಗೇರಿ, ಜೆ ಎಂ ರಾಜಶೇಖರ ಉಪಸ್ಥಿತರಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರಭಾಕರ ಎನ್ ಶಿಗ್ಲಿ ಸ್ವಾಗತಿಸಿದರು. ಗೌರವ ಕಾರ್ಯದರ್ಶಿಗಳಾದ ಜಗದೀಶ ಮಳಿಮಠ ಪ್ರಾಸ್ತಾವಿಕವಾಗಿ ಮಾತನಾಡಿದ ಕ ಸಾ ಪ ಗೌರವ ಕಾರ್ಯದರ್ಶಿಗಳಾದ ಜಗದೀಶ ಮಳಿಮಠ ರವರು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಕಾರ್ಯಕ್ರಮಗಳು ನಡೆದು ಬಂದ ಬಗೆಯನ್ನು ವಿವರಿಸಿದರು. ಶಿವಾನಂದ ಬಗಾದಿ ಅವರು ಸಾಹಿತ್ಯಿಕ, ಸಾಂಸ್ಕೃತಿಕ, ಆರ್ಥಿಕ, ಮತ್ತು ಜಾನಪದ ಸಂಸ್ಕೃತಿಗೆ ವತ್ತು ನೀಡುವುದರೊಂದಿಗೆ ಕಲಾ ಪೋಷಕರೂ ಆದ ದತ್ತಿ ದಾನಿಗಳ ಪರಿಚಯ ಮಾಡಿದರು. ಬಸನಗೌಡ ಉಮ್ಮನಗೌಡ್ರ ವಂದಿಸಿದರು.
ಎಸ್ ಸಿ ಶಡಕ್ಷರಿಮಠ, ಶಿವಾನಂದ ಸಾಲಗೇರಿ, ಚಂದ್ರಶೇಖರ ಮಡಿವಾಳರ, ಕೊಟ್ರೇಶಪ್ಪ ಯಮ್ಮಿ, ಮಲ್ಲಿಕಾರ್ಜುನ ಸಾವಕ್ಕಳವರ, ವಿದ್ಯಾವತಿ ಮಳಿಮಠ, ನಿರ್ಮಲಾ ಲಮಾಣಿ, ಶೋಭಾ ನಾಗನಗೌಡ್ರ, ಪ್ರಕಾಶ ಗಚ್ಚಿನಮಠ ಸೇರಿದಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಕನ್ನಡಾಭಿಮಾನಿಗಳು, ಪತ್ರಿಕಾ ಮಾಧ್ಯಮದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ದೊಡ್ಡನಾಗಪ್ಪಕಾಕಿ ದತ್ತಿ ಕಾರ್ಯಕ್ರಮ ಉದ್ಘಾಟನೆ
On: February 13, 2025 6:37 PM
--Ad--

