ರಾಣೆಬೆನ್ನೂರ: ಸ್ಥಳೀಯ ಎ.ಪಿ.ಎಂ.ಸಿ. ಯಾರ್ಡಿನಲ್ಲಿರುವ ಪ್ರತಿಷ್ಠಿತ ಶ್ರೀ ಸಿದ್ದೇಶ್ವರ ಕೋ – ಆಪರೇಟಿವ್ ಬ್ಯಾಂಕ್ ಲಿ. ಇದರ ನೂತನ ಆಡಳಿತ ಮಂಡಳಿಗೆ ಬುಧವಾರ ನಡೆದ ಚುನಾವಣೆಯಲ್ಲಿ ನಗರದ ಗಣ್ಯ ವರ್ತಕ, ಲಯನ್ಸ್ ಎಂ.ಜಿ.ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ದಾನಿ ಮಲ್ಲೇಶಪ್ಪ ಶಿವಪ್ಪ ಅರಕೇರಿಯವರು ಸತತ ಬಾರಿಗೆ 6ನೇ ಅಧ್ಯಕ್ಷರಾಗಿ ಹಾಗೂ ರವಿ ವೀರಪ್ಪ ಕರ್ಜಗಿ ಉಪಾದ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡರು ಎಂದು ಚುನಾವಣಾಧಿಕಾರಿ ಹಾಗೂ ಜಿಲ್ಲಾ ಸಹಾಯಕ ನಿಬಂಧಕ ವಿಕ್ರಂ ಕುಲಕರ್ಣಿ ಘೋಷಿಸಿದರು.
ಆನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ಬ್ಯಾಂಕಿನ ನೂತನ ಅಧ್ಯಕ್ಷ – ಉಪಾಧ್ಯಕ್ಷರನ್ನು ನೂತನ ನಿರ್ದೇಶಕರುಗಳು, ವಿವಿಧ ಸಂಘ-ಸಂಸ್ಥೆಗಳ ಮುಖಂಡರುಗಳು, ಬ್ಯಾಂಕಿನ ಸಿಬ್ಬಂದಿ ಅಭಿನಂದಿಸಿ ಗೌರವಿಸಿದರು. 1996ರಲ್ಲಿ ಆರಂಭವಾದ ಈ ಬ್ಯಾಂಕಿಗೆ ಮಾಜಿ ಶಾಸಕ ವಿಎಸ್ ಕರ್ಜಗಿ ಪ್ರಥಮ ಅಧ್ಯಕ್ಷರಾದರು. ಅವರ ನಿಧನದ ಆನಂತರ ಮಲ್ಲೇಶಣ್ಣರವರು ನಿರಂತರವಾಗಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.


